ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ

ಪೀಠಿಕೆ
ಪರೀಕ್ಷೆ... ಪರೀಕ್ಷೆ... ಪರೀಕ್ಷೆ, ಮಾರ್ಚ್ - ಏಪ್ರಿಲ್ ತಿಂಗಳು ಬಂತೆಂದರೆ ಪರೀಕ್ಷೆಗಳು ಸಾಲುಸಾಲಾಗಿ ಪ್ರಾರಂಭವಾಗುತ್ತದೆ. ಪರೀಕ್ಷೆ ಎಂಬುದು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ಮನೋಸ್ಥಿತಿ ಮತ್ತು ಪರಿಶ್ರಮವನ್ನು ಅಳೆಯುವ ಪ್ರಮುಖ ಸಾಧನವೇ ಪರೀಕ್ಷೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಯ ಮಹತ್ವ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಶಿಕ್ಷಕರು ಮತ್ತು ಪೋಷಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ಇವರ ಸರಿಯಾದ ಬೆಂಬಲ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ವಿದ್ಯಾರ್ಥಿಯ ಯಶಸ್ಸಿಗೆ ಆಧಾರವಾಗುತ್ತದೆ
ಪರೀಕ್ಷೆಯ ಮಹತ್ವ ಮತ್ತು ವಿದ್ಯಾರ್ಥಿಗಳ ಮನಸ್ಥಿತಿ
ಪರೀಕ್ಷೆ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವ ಒಂದು ಮಾನದಂಡ ಮಾತ್ರವಲ್ಲ, ಅದು ಅವರ ಆತ್ಮವಿಶ್ವಾಸವನ್ನು ಬೆಳೆಸುವ ಅವಕಾಶವೂ ಹೌದು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯ, ಆತಂಕ ಮತ್ತು ಒತ್ತಡವನ್ನು ಅನುಭವಿಸುತ್ತಾರೆ. ವಿಶೇಷವಾಗಿ ಹತ್ತನೇ ಮತ್ತು ಪಿಯುಸಿ ತರಗತಿಗಳಂತಹ ಪ್ರಮುಖ ಹಂತಗಳಲ್ಲಿ ಈ ಒತ್ತಡ ಹೆಚ್ಚು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಯ ಮನೋಸ್ಥಿತಿಯನ್ನು ಸಮತೋಲನದಲ್ಲಿರಿಸಲು ಶಿಕ್ಷಕರು ಮತ್ತು ಪೋಷಕರು ಪ್ರಮುಖ ಪಾತ್ರವಹಿಸುತ್ತಾರೆ.
ಪರೀಕ್ಷಾ ಸಮಯದಲ್ಲಿ ಶಿಕ್ಷಕರ ಪಾತ್ರ
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರು ಅತಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ಶಿಕ್ಷಣದ ಮಟ್ಟವನ್ನು ಅಳೆಯುವ ಸಾಧನವೇ ಪರೀಕ್ಷೆ. ಈ ಪರೀಕ್ಷೆಯನ್ನು ಎದುರಿಸುವಾಗ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಶಿಕ್ಷಕರು ಅತಿ ಪ್ರಮುಖವಾದ ಪಾತ್ರವನ್ನು ವಹಿಸಬೇಕಾಗುತ್ತದೆ. ಅವುಗಳನ್ನು ಈ ಕೆಳಕಂಡಂತೆ ತಿಳಿಯಬಹುದಾಗಿದೆ.
ಸರಿಯಾದ ಮಾರ್ಗದರ್ಶನ
ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠದ ವಿಷಯವನ್ನು ಸ್ಪಷ್ಟವಾಗಿ ಹಾಗೂ ಸರಳವಾಗಿ ತಿಳಿಸಬೇಕು. ಮುಖ್ಯ ಅಂಶಗಳನ್ನು ಗುರುತಿಸಿ, ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಹಿಂದಿನ ಪ್ರಶ್ನಾಪತ್ರಿಕೆಗಳನ್ನು ಪರಿಚಯಿಸಿ, ಪರೀಕ್ಷೆಯ ಮಾದರಿಯನ್ನು ತಿಳಿಸಿಕೊಡುವುದು ಬಹಳ ಉಪಯುಕ್ತ.
ಅಧ್ಯಯನ ಯೋಜನೆ ರೂಪಿಸುವುದು
ಪರೀಕ್ಷೆಗೆ ಮುನ್ನ ಸರಿಯಾದ ವೇಳಾಪಟ್ಟಿಯನ್ನು ರೂಪಿಸುವಲ್ಲಿ ಶಿಕ್ಷಕರು ಸಹಾಯ ಮಾಡಬೇಕು. ದಿನನಿತ್ಯದ ಓದು, ಮರುಪಠಣ ಮತ್ತು ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬಹುದು.
ಮಾನಸಿಕ ಬೆಂಬಲ
ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಕಂಗಾಲಾಗುತ್ತಾರೆ. ಶಿಕ್ಷಕರು ಅವರಿಗೆ ಧೈರ್ಯ ತುಂಬಿ, “ಪರೀಕ್ಷೆ ಜೀವನದ ಅಂತಿಮ ಗುರಿಯಲ್ಲ” ಎಂಬ ಮನೋಭಾವವನ್ನು ಬೆಳೆಸಬೇಕು. ಪ್ರೋತ್ಸಾಹದ ಮಾತುಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ.
ವೈಯಕ್ತಿಕ ಗಮನ
ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಭಿನ್ನವಾಗಿರುತ್ತದೆ. ಕೆಲವರು ವೇಗವಾಗಿ ಅರ್ಥಮಾಡಿಕೊಳ್ಳುತ್ತಾರೆ, ಕೆಲವರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಅಗತ್ಯಗಳನ್ನು ಗಮನಿಸಿ ಮಾರ್ಗದರ್ಶನ ನೀಡಬೇಕು.
ನೈತಿಕ ಮೌಲ್ಯಗಳ ಬೋಧನೆ
ಪರೀಕ್ಷೆಯಲ್ಲಿ ನಕಲು ಮಾಡುವಂತಹ ತಪ್ಪುಗಳನ್ನು ತಡೆಯಲು ಶಿಕ್ಷಕರು ಸತ್ಯನಿಷ್ಠೆಯ ಮಹತ್ವವನ್ನು ತಿಳಿಸಬೇಕು. ಸತ್ಯ ಮತ್ತು ಪರಿಶ್ರಮದ ಮೂಲಕವೇ ಯಶಸ್ಸು ಸಾಧ್ಯವೆಂಬ ಸಂದೇಶವನ್ನು ನೀಡಬೇಕು.
ಪರೀಕ್ಷಾ ಸಮಯದಲ್ಲಿ ಪೋಷಕರ ಪಾತ್ರ
ಉತ್ತಮ ವಾತಾವರಣ ನಿರ್ಮಾಣ
ಮನೆ ಎನ್ನುವುದು ವಿದ್ಯಾರ್ಥಿಗೆ ಮೊದಲ ಶಾಲೆ. ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಶಾಂತ, ಸುಗಮ ಮತ್ತು ಓದಲು ಅನುಕೂಲವಾದ ವಾತಾವರಣ ಇರಬೇಕು. ಟಿವಿ, ಮೊಬೈಲ್ ಮತ್ತು ಇತರ ಮಾಧ್ಯಮಗಳನ್ನು ಪರೀಕ್ಷಾ ಸಮಯದಲ್ಲಿ ಆದಷ್ಟು ವಿದ್ಯಾರ್ಥಿಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.
ಒತ್ತಡ ನೀಡದೆ ಪ್ರೋತ್ಸಾಹಿಸುವುದು
ಹೆಚ್ಚಿನ ನಿರೀಕ್ಷೆಗಳು ಕೆಲವೊಮ್ಮೆ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತವೆ. ಪೋಷಕರು “ಉತ್ತಮವಾಗಿ ಪ್ರಯತ್ನಿಸು” ಎಂಬ ಮಾತನ್ನು ಹೇಳಬೇಕು. “ಮೊದಲನೇ ಸ್ಥಾನ ಬೇಕು” ಎಂಬ ಒತ್ತಡವನ್ನು ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೇರಬಾರದು.
ಆರೋಗ್ಯದ ಕಡೆ ಗಮನ
ಪರೀಕ್ಷಾ ಸಮಯದಲ್ಲಿ ಸರಿಯಾದ ಆಹಾರ, ಸಮರ್ಪಕ ನಿದ್ರೆ ಮತ್ತು ವಿಶ್ರಾಂತಿ ಅತ್ಯಂತ ಮುಖ್ಯ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಬೇಕು. ಆರೋಗ್ಯ ಚೆನ್ನಾಗಿದ್ದರೆ ಮನಸ್ಸು ಕೂಡ ಏಕಾಗ್ರವಾಗಿರುತ್ತದೆ.
ಸಮಯ ನಿರ್ವಹಣೆಯಲ್ಲಿ ಸಹಾಯ
ಪೋಷಕರು ಮಕ್ಕಳಿಗೆ ಸಮಯವನ್ನು ಸರಿಯಾಗಿ ಹಂಚಿಕೊಳ್ಳುವಲ್ಲಿ ಸಹಾಯ ಮಾಡಬಹುದು. ಓದು, ವಿಶ್ರಾಂತಿ ಮತ್ತು ಮನರಂಜನೆಗೆ ಸಮಯದ ಸಮತೋಲನ ಅಗತ್ಯ.
ಆತ್ಮವಿಶ್ವಾಸ ಬೆಳೆಸುವುದು
ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಪೋಷಕರ ಮುಖ್ಯ ಕರ್ತವ್ಯ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಅದು ಜೀವನದ ಅಂತ್ಯವಲ್ಲ, ಒಂದು ಪಾಠ ಮಾತ್ರ ಎಂದು ಮನವರಿಕೆ ಮಾಡಿ ಆತ್ಮವಿಶ್ವಾಸವನ್ನು ತುಂಬಬೇಕು.
ಶಿಕ್ಷಕರು ಮತ್ತು ಪೋಷಕರ ಸಮನ್ವಯ
ವಿದ್ಯಾರ್ಥಿಯ ಸಂಪೂರ್ಣ ಅಭಿವೃದ್ಧಿಗೆ ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಶಾಲಾ-ಮನೆಯ ಸಂಪರ್ಕ ಉತ್ತಮವಾಗಿದ್ದರೆ ವಿದ್ಯಾರ್ಥಿಯ ಸಾಧನೆ ಹೆಚ್ಚುತ್ತದೆ. ಮಕ್ಕಳ ಪ್ರಗತಿಯನ್ನು ಚರ್ಚಿಸಿ, ದುರ್ಬಲ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಪರೀಕ್ಷಾ ಭಯವನ್ನು ನಿವಾರಿಸಲು ಧೈರ್ಯ ತುಂಬುವ ಮಾತುಗಳು, ಪ್ರಾಯೋಗಿಕ ಸಲಹೆಗಳು ಮತ್ತು ಸರಿಯಾದ ಅಭ್ಯಾಸ ಅಗತ್ಯ. ಶಿಕ್ಷಕರು ಮಾದರಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬಹುದು. ಪೋಷಕರು ಮನೆಯಲ್ಲಿ ಧೈರ್ಯ ತುಂಬುವ ವಾತಾವರಣವನ್ನು ಸೃಷ್ಟಿಸಬೇಕು
ಮೌಲ್ಯಮಾಪನದ ನಂತರದ ಪಾತ್ರ
ಫಲಿತಾಂಶ ಬಂದ ನಂತರವೂ ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಗಿಯುವುದಿಲ್ಲ. ಉತ್ತಮ ಫಲಿತಾಂಶ ಬಂದರೆ ಅಭಿನಂದಿಸಬೇಕು. ಕಡಿಮೆ ಅಂಕ ಬಂದರೆ ಕಾರಣವನ್ನು ತಿಳಿದು ಸುಧಾರಣೆಗೆ ಪ್ರೇರೇಪಿಸಬೇಕು. ಟೀಕೆ ಮಾಡುವುದಕ್ಕಿಂತ ಮಾರ್ಗದರ್ಶನ ನೀಡುವುದು ಮುಖ್ಯ
ಉಪಸಂಹಾರ
ಒಟ್ಟಾರೆ ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಯ ಯಶಸ್ಸಿನ ಎರಡು ಕಣ್ಣುಗಳಂತೆ. ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹ ಒಟ್ಟುಗೂಡಿದಾಗ ವಿದ್ಯಾರ್ಥಿಯ ಸಾಧನೆ ಗರಿಷ್ಠ ಮಟ್ಟಕ್ಕೇರುತ್ತದೆ. ಪರೀಕ್ಷೆ ಜೀವನದ ಒಂದು ಹಂತ ಮಾತ್ರ. ಜೀವನದ ಸಂಪೂರ್ಣ ಗುರಿಯಲ್ಲ. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ, ಶ್ರಮದಿಂದ ಮತ್ತು ಸಕಾರಾತ್ಮಕ ಮನೋಭಾವದಿಂದ ಪರೀಕ್ಷೆಯನ್ನು ಎದುರಿಸಲು ಶಿಕ್ಷಕರು ಮತ್ತು ಪೋಷಕರು ದಾರಿದೀಪರಾಗಬೇಕು.ಈ ರೀತಿಯಾಗಿ ಪರೀಕ್ಷಾ ಸಮಯದಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವರ ಸಮರ್ಪಕ ಮಾರ್ಗದರ್ಶನ, ಪ್ರೀತಿ ಮತ್ತು ಬೆಂಬಲದಿಂದ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಾರೆ.









Comments